ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆಗಿರುವ ಪದ್ಮವಿಭೂಷಣ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಜನಾ ಪರಿಷತ್ತಿನ ಜಿಲ್ಲಾ ಸಂಯೋಜಕರು ವಿದ್ಯಾರ್ಥಿಗಳಿಗೆ ಪೂಜ್ಯ ಖಾವಂದರ ಜೀವನ ಪರಿಚಯವನ್ನು ಮಾಡಿಕೊಟ್ಟರು. ಅವರ ಬಾಲ್ಯ, ಸರಳ ಜೀವನ, ಸೇವಾ ಮನೋಭಾವ, ಧಾರ್ಮಿಕ ಚಿಂತನೆ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಮನಮುಟ್ಟುವಂತೆ ವಿವರಿಸಿದರು.
ಧರ್ಮಸ್ಥಳದ ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಗ್ರಾಮಾಭಿವೃದ್ಧಿ ಹಾಗೂ ಸಮಾಜ ಸೇವೆಯ ಮೂಲಕ ಅವರು ಸಲ್ಲಿಸುತ್ತಿರುವ ಅಮೂಲ್ಯ ಕೊಡುಗೆಗಳನ್ನು ತಿಳಿಸಿಕೊಟ್ಟರು. ಪೂಜ್ಯ ಖಾವಂದರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರವೀಣ ಕಾಮತ್ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನಿರೂಪಣೆಯನ್ನು ಸಹ ಶಿಕ್ಷಕಿ ಶ್ರೀಮತಿ ಕಸ್ತೂರಿ ಇವರು ನೆರವೇರಿಸಿದರು. ಅತಿಥಿಗಳ ಪರಿಚಯವನ್ನು ಗೀತಾ ಪಿ ಇವರು ನೆರವೇರಿಸಿದರೆ ,ಸ್ವಾಗತ ಸಹ ಶಿಕ್ಷಕಿ ಶ್ರೀಮತಿ ಚೇತನ ಧನ್ಯವಾದ ವನ್ನು ಸಹ ಶಿಕ್ಷಕಿ ಶ್ರೀಮತಿ ನೀತಕೆಎಸ್ ನೆರವೇರಿಸಿಕೊಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









