ಬಳ್ಳಮಂಜ: ಗ್ರಾಮೀಣ ಭಾಗದ ಮಕ್ಕಳಿಗೆ ಭಾರತೀಯ ಶಾಸ್ತ್ರೀಯ ನೃತ್ಯ ಕಲೆಯನ್ನು ಪರಿಚಯಿಸುವ ಸದುದ್ದೇಶದಿಂದ ಬಳ್ಳಮಂಜದ ಸಮುದಾಯ ಭವನದಲ್ಲಿ ‘ಗುರುಭಕ್ತಿ’ ನಾಟ್ಯಾಲಯದ ಭರತನಾಟ್ಯ ತರಬೇತಿ ತರಗತಿಯು ನವೆಂಬರ್ 10ರಂದು ಮಂಗಳವಾರ ಶುಭಾರಂಭಗೊಂಡಿತು.
ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಭರತನಾಟ್ಯದಂತಹ ಶಾಸ್ತ್ರೀಯ ಕಲಾ ತರಗತಿಗಳು ಆರಂಭವಾಗಿರುವುದು ಊರಿನ ಜನತೆಯ ಸೌಭಾಗ್ಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೃತ್ಯ ಕಲೆಯಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೃತ್ಯ ನಿರ್ದೇಶಕಿ ಹಾಗೂ ಗುರುಗಳಾದ ವಿದುಷಿ ಶ್ರೀಮತಿ ಸ್ವಾತಿ ಜಯರಾಮ್ ಮಾತನಾಡಿ, ತಮ್ಮಲ್ಲಿ ನೃತ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಇಂದು ಕೌಟುಂಬಿಕ ಜೀವನದ ಜವಾಬ್ದಾರಿಗಳೊಂದಿಗೆ ಭರತನಾಟ್ಯ ಕಲೆಯನ್ನು ಮುಂದುವರಿಸಿ, ಬಳ್ಳಮಂಜದಂತಹ ಗ್ರಾಮೀಣ ಪ್ರದೇಶದಲ್ಲಿ ನಾಟ್ಯಾಲಯವನ್ನು ಆರಂಭಿಸಿರುವುದು ಶಿಕ್ಷಕಿಯಾಗಿ ತಾನು ಕಲಿಸಿದ ವಿದ್ಯೆಗೆ ಸಾರ್ಥಕತೆ ದೊರೆತಂತಾಗಿದೆ. ಈ ಪ್ರಯತ್ನವು ಇನ್ನಷ್ಟು ಪ್ರತಿಭಾವಂತ ಕಲಾವಿದರನ್ನು ರೂಪಿಸುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜು ಪುಂಜಾಲಕಟ್ಟೆಯ ನಿವೃತ್ತ ಅಧಿಕಾರಿ ಶ್ರೀ ಪ್ರವೀಣ್ ಕುಮಾರ್ ದೋಟ ಅವರು ಮಾತನಾಡಿ, ಗುಂಡಿಯಲ್ಕೆ ಕುಟುಂಬವು ಹಲವು ಸಾಮಾಜಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಈ ಕುಟುಂಬದ ಮಹಿಳೆಯೊಬ್ಬರು ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಚ್ಚಿನ ಗ್ರಾಮದಲ್ಲಿ ನಾಟ್ಯಾಲಯ ಆರಂಭಿಸಿರುವುದು ಸಂತಸದ ವಿಚಾರ. ಊರಿನ ಜನರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆದು ಉತ್ತಮ ನೃತ್ಯ ಕಲಾವಿದರನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗುಂಡಿಯಲ್ಕೆ ಕುಟುಂಬದ ಹಿರಿಯರಾದ ಶ್ರೀ ಜಿ. ಬಾಲಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಭಕ್ತಿಪ್ರಿಯ ಎ. ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ನಾಟ್ಯಾಲಯದ ನೃತ್ಯ ಶಿಕ್ಷಕಿ ಶ್ರೀಮತಿ ಅಮಿತಾ ಅಶೋಕ್ ಗುಂಡಿಯಲ್ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ತುಳಸಿದಾಸ್ ಪೈ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಶ್ರೀ ಅಶೋಕ್ ಗುಂಡಿಯಲ್ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ನಾಟ್ಯಾಲಯದ ಆರಂಭಕ್ಕೆ ಸಾಕ್ಷಿಯಾದರು.
ಗ್ರಾಮೀಣ ಭಾಗದಲ್ಲಿಯೇ ಮಕ್ಕಳಿಗೆ ಭಾರತೀಯ ಶಾಸ್ತ್ರೀಯ ನೃತ್ಯ ಕಲೆಯನ್ನು ಕಲಿಯಲು ಅವಕಾಶ ಕಲ್ಪಿಸಿರುವ ‘ಗುರುಭಕ್ತಿ’ ನಾಟ್ಯಾಲಯದ ಈ ಪ್ರಯತ್ನವು ಸ್ಥಳೀಯ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಮೂಡಿಸಿದೆ.








